ಬಾಪಿರಾಜು, ಅಡವಿ
1895-1952 ತೆಲುಗಿನ ಕವಿ, ಕಾದಂಬರಿಕಾರ, ವಿಮರ್ಶಕ, ಚಿತ್ರಕಾರ, ಶಿಲ್ಪಿ, ಚಲನಚಿತ್ರ ಕಲಾ ನಿರ್ದೇಶಕ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮವರಮ್ ಇವರ ಜನ್ಮಸ್ಥಳ.

1920ರ ಅನಂತರದ ಆಂಧ್ರಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳಿಗೆ ಇವರ ಕೊಡುಗೆ ಗಮನಾರ್ಹವಾದುದು. ರಾಜಮಂಡ್ರಿಯ ಕಲಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಅಸ್ವಾಲ್ಡ್‍ಕೂಲ್ಡ್ರೇ ಎಂಬವರು ಇವರಿಗೆ ಆಂಗ್ಲ ಸಾಹಿತ್ಯದ ಆಳವಾದ ಪರಿಚಯ ಮಾಡಿಕೊಟ್ಟರು. ಆಂಧ್ರದ ಹಳ್ಳಿಯ ಹಾಡು, ತೊಗಲುಗೊಂಬೆ ಆಟ, ವೀದಿನಾಟಕಗಳ ಕಲಾತ್ಮಕತೆಗೆ ಮಾರುಹೋಗಿದ್ದ ಕೂಲ್ಡ್ರೇ ಅವರು ಬಾಪಿರಾಜು ಅವರಿಗೂ ಜನಪದಕಲೆಯಲ್ಲಿ ಆಸಕ್ತಿ ಮೂಡುವಂತೆ ಮಾಡಿದರು. ಪ್ರಾಚ್ಯ-ಪಾಶ್ಚಾತ್ಯ ಸಂಸ್ಕøತಿಗಳನ್ನು ಜೀರ್ಣಿಸಿಕೊಂಡು ಬೆಳೆದ ಬಾಪಿರಾಜು 1922ರಲ್ಲಿ ತೊಲಕರಿ (ಮುಂಗಾರು) ಎಂಬ ಕವನ ಸಂಕಲನವನ್ನು ಪ್ರಕಟಿಸಿದರು. ಅದೇವರ್ಷ ರಾಷ್ಟ್ರೀಯ ಚಳವಳಿಯಲ್ಲೂ ಭಾಗವಹಿಸಿ ಸೆರೆಮನಿಗೆ ಹೋದರು. ಸೆರೆಮನೆಯಲ್ಲಿರುವಾಗಲೇ ಇವರು ಪ್ರಾರಂಭಿಸಿದ ಹಿಮಬಿಂದು ಎಂಬ ಕಾದಂಬರಿ ಕಥನಕೌಶಲ, ವರ್ಣನಾ ನೈಪುಣ್ಯ, ಪಾತ್ರಚಿತ್ರಣ, ಸನ್ನಿವೇಶ ಕಲ್ಪನೆ ಮುಂತಾದ ಎಲ್ಲ ವಿಷಯಗಳಲ್ಲೂ ಆಧುನಿಕ ತೆಲುಗು ಸಾಹಿತ್ಯದ ಅತ್ಯುತ್ತಮ ಕೃತಿಗಳಲ್ಲೊಂದೆಂದು ಖ್ಯಾತವಾಗಿದೆ. ಈ ಕಾದಂಬರಿಯಲ್ಲಿ ಶಾತವಾಹನರ ಕಾಲದ ಸಮಾಜ ಜೀವನದ ಚಿತ್ರ ನಿರೂಪಿತವಾಗಿದೆ. ಅಡವಿಶ್ರಾಂತಿಶ್ರೀ, ಗೋನಗನ್ನಾರೆಡ್ಡಿ ಇವು ಇವರ ಇನ್ನೆರಡು ಐತಿಹಾಸಿಕ ಕಾದಂಬರಿಗಳು. ಅಡವಿಶ್ರಾಂತಿಶ್ರೀ ಶಾತವಾಹನರ ಕಾಲಕ್ಕೂ ಗೋನಗನ್ನಾ ರೆಡ್ಡಿ ಕಾಕತೀಯರ ಕಾಲಕ್ಕೂ ಸಂಬಂಧಿಸಿದ್ದಾಗಿವೆ. ನಾರಾಯಣರಾವು ಎಂಬುದು ಸಾಮಾಜಿಕ ಕಾದಂಬರಿ ಇದು ಕನ್ನಡಕ್ಕೂ ಅನುವಾದವಾಗಿದೆ. ಶಿಲ್ಪಬಾಲ, ವೀಣ, ಹಿಮಾಲಯ ರಶ್ಮಿ ಮುಂತಾದ ಸಣ್ಣ ಕಥೆಗಳಲ್ಲೂ ಇವರ ಕಲಾವಂತಿಕೆ ವ್ಯಕ್ತವಾಗಿದೆ.

ಇವರು ಚಿತ್ರಕಾರರಾಗಿಯೂ ಪ್ರಸಿದ್ಧರಾಗಿದ್ದಾರೆ. ಬಂದರಿನ ನ್ಯಾಶನಲ್ ಕಾಲೇಜಿನಲ್ಲಿ ಪ್ರಮೋದಕುಮಾರ್ ಚಟ್ಟೋಪಾಧ್ಯಾಯರ ಬಳಿ ಚಿತ್ರಕಲೆ ಕಲಿತರು. ಸಮುದ್ರಗುಪ್ತ, ತಿಕ್ಕನಕವಿ, ಮುಂತಾದವು ಇವರ ಖ್ಯಾತ ಚಿತ್ರಗಳು. ಭಾವುಕತೆ, ಕಲಾವಂತಿಕೆ, ಭಾರತೀಯತೆ, ಸಂಪ್ರದಾಯಾಭಿಮಾನ, ಲಾಲಿತ್ಯ ಇವರ ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಕಂಡುಬರುವ ಮುಖ್ಯ ಗುಣಗಳು.										(ಆರ್.ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ